ಇಂಡಿಯನ್ ನೇಷನ್ 
ಪಾಟ್ನದಲ್ಲಿ 1931ರಲ್ಲಿ ಪ್ರಾರಂಭವಾದ ಇಂಗ್ಲಿಷ್ ಭಾಷಾ ದಿನಪತ್ರಿಕೆ. ಸುಪ್ರಸಿದ್ಧ ಪ್ರಕಟನೋದ್ಯಮಿಗಳಾದ ಡಾ. ಸಚ್ಚಿದಾನಂದ ಸಿನ್ಹರು ಈ ಪತ್ರಿಕೆಯ ಜನ್ಮಕ್ಕೆ ಮೂಲ ಕಾರಣರು. ಆಗ ಪ್ರಚಾರದಲ್ಲಿದ್ದ ಸರ್ಚ್‍ಲೈಟ್ ಎಂಬ ದಿನಪತ್ರಿಕೆ ಕಾಂಗ್ರೆಸ್ ಪಕ್ಷದ ರೀತಿನೀತಿಗಳನ್ನೇ ಸಮರ್ಥಿಸುತ್ತಿದ್ದು. ವಿರೋಧ ಪಕ್ಷಗಳ ಅಭಿಪ್ರಾಯಕ್ಕೆ ಸಾಕಷ್ಟು ಮನ್ನಣೆ ಕೊಡುತ್ತಿರಲಿಲ್ಲವಾದ ಕಾರಣ. ದರ್ಭಾಂಗ ಮಹಾರಾಜರ ಸಹಾಯದಿಂದ ಈ ಪತ್ರಿಕೆಯನ್ನು ಹೊರಡಿಸಲಾಯಿತು. ಹಾರ್ಡಿ, ಚಟರ್ಜಿ, ಡಾ. ಸಚ್ಚಿದಾನಂದಸಿನ್ಹ, ಡಾ. ವೈಮಾಂಟ್, ಜೆ.ಸಿ. ರೋಮ್, ಸೋಮಯಾಜುಲು, ಸಿ. ವಿ. ಎಚ್. ರಾಮ್, ಎಸ್. ವಿ. ಚಾರಿ ಮತ್ತು ಡಾ. ಸಚಿನ್ ಸೇನರು ಈ ಪತ್ರಿಕೆಯ ಸಂಪಾದಕರುಗಳಾಗಿ ಕೆಲಸ ಮಾಡಿ ಇದನ್ನು ಬಿಹಾರದ ಉತ್ತಮ ಇಂಗ್ಲಿಷ್ ದಿನಪತ್ರಿಕೆಗಳಲ್ಲೊಂದನ್ನಾಗಿ ಮಾಡಲು ಸಹಾಯ ಮಾಡಿದರು. ಈ ಪತ್ರಿಕೆಯ ಅಭಿವೃದ್ಧಿಯಲ್ಲಿ ಸುಪ್ರಸಿದ್ಧ ಪತ್ರಿಕೋದ್ಯಮಿಗಳಾದ ಸಿ. ವೈ. ಚಿಂತಾಮಣಿ ಮತ್ತು ಎಸ್. ಐಯಂಗಾರ್ಯರು ಆಗಾಗ್ಗೆ ನೆರವು ನೀಡಿದ್ದಾರೆ. ಕಾಂಗ್ರೆಸ್ಸಿನ ರೀತಿನೀತಿಗಳನ್ನು ಮೊದ ಮೊದಲು ವಿರೋಧಿಸಿದರೂ 1942ನೆಯ ಆಗಸ್ಟ್ ಚಳುವಳಿಯಲ್ಲಿ ಬಿಹಾರ ಸರ್ಕಾರದ ಸುದ್ದಿ ನಿಯಂತ್ರಣಾಧಿಕಾರವನ್ನು ಪ್ರಬಲವಾಗಿ ವಿರೋಧಿಸಿ, ಮಹಾತ್ಮ ಗಾಂಧಿಯವರ ದಸ್ತಗಿರಿಯನ್ನು ಕಟುವಾಗಿ ಖಂಡಿಸಿ, ಈ ಪತ್ರಿಕೆ ತನ್ನ ರಾಷ್ಟ್ರೀಯ ಮನೋಭಾವವನ್ನು ವ್ಯಕ್ತಗೊಳಿಸಿತು. ಕಾರ್ಯಾಲಯದ ಎಲ್ಲ ಶಾಖೆಗಳೂ ಆಧುನಿಕ ಉಪಕರಣಗಳಿಂದ ಸಜ್ಜಿತವಾಗಿದ್ದು ಒಳ್ಳೆಯ ಮುದ್ರಣ ಮತ್ತು ಯೋಗ್ಯ ವಿಷಯಗಳಿಂದಾಗಿ ಈ ಪತ್ರಿಕೆ ಬಿಹಾರದ ಜನಪ್ರಿಯ ಇಂಗ್ಲಿಷ್ ಪತ್ರಿಕೆಯೆಂದು ಹೆಸರು ಗಳಿಸಿದೆ.									 
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ